ನಾಸಿರ್ - ಇ - ಖುಸ್ರು
1004-1088. ಪರ್ಷಿಯಾದ ಕವಿ, ಪ್ರವಾಸಿ, ಧರ್ಮಪ್ರಚಾರ. ಷಿಇತ್ ಮನೆತನದ ಈತ ಆಫ್ಘನ್ ತುರ್ಕಿಸ್ಥಾನದ ಬಾಲ್ಖ್ ಬಳಿ ಹುಟ್ಟಿದ ಈತನ ಪೂರ್ಣ ಹೆಸರು ಅಬು ಮುಯಿನಿದ್-ದೀನ-ನಾಸಿರ್-ಇ-ಖುಸ್ರು ಅಲ್ ಕ್ಯುಮದಯಾನಿ ಅಲ್‍ಮರ್‍ವಾಜಿ. ಈತ ಖುರಸಾನ್‍ನಲ್ಲಿ ಸಾಲ್ಝಕ್ ಸರ್ಕಾರದ ಕಂದಾಯದ ಅಧಿಕಾರಿಯಾಗಿದ್ದು 1045ರಲ್ಲಿ ಕೆಲಸಕ್ಕೆ ರಾಜಿನಾಮೆಯಿತ್ತು ಮಕ್ಕಾಯಾತ್ರೆ ಕೈಗೊಂಡ. ಸ್ವಪ್ನದಲ್ಲಿ ಮಕ್ಕಾಯಾತ್ರೆ ಮಾಡು ಎಂದು ದೇವವಾಣಿ ಆದೇಶವಿತ್ತಂತಾಗಲು ಈತನ ಹೃದಯ ಪರಿವರ್ತನೆಯಾಯಿತೆಂದು ಹೇಳುತ್ತಾರೆ. ತುಂಬ ಕುಡುಕನಾಗಿದ್ದ ಈತ ಅಂದಿನಿಂದ ಕುಡಿಯುವುದನ್ನು ಸಂಪೂರ್ಣ ಬಿಟ್ಟು ದೈವಚಿಂತನೆಯ ಕಡೆ ತಿರುಗಿದನಂತೆ. ಸಿರಿಯ, ಜೆರುಸಲಮ್, ಬೆತ್ಲಿಹೆಂ ಮುಂತಾದ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ 1047ರಲ್ಲಿ ಮಕ್ಕಾಕ್ಕೆ ಬಂದ. ಅಲ್ಲಿಂದ ಮತ್ತೆ ಜೆರುಸಲಮ್‍ಗೆ ಬಂದು ಭೂಮಾರ್ಗವಾಗಿ ಈಜಿಪ್ಟಿಗೆ ಹೋದ. ಕೈರೋದಲ್ಲಿ ಏಳುವರ್ಷ ಇದ್ದ. ಅಲ್ಲಿನ ಧಾರ್ಮಿಕ ವಾತಾವರಣ, ಕಲೀಫನ ಧರ್ಮಯುಕ್ತವಾದ ರಾಜ್ಯಭಾರ ಈತನಿಗೆ ತುಂಬ ಹಿಡಿಸಿತು. ಅಲ್ಲಿ ಇಸ್ಮೈಲಿ ಧರ್ಮವನ್ನು ಸ್ವೀಕಾರ ಮಾಡಿ ತನ್ನ ಸ್ವದೇಶವಾದ ಖುರಾಸಾನ್‍ನಲ್ಲೂ ಆ ಧರ್ಮ ಪ್ರಚಾರ ಮಾಡಲು ಕಲೀಫನ ಅನುಮತಿ ಪಡೆದ. 1057ರಲ್ಲಿ ಬಾಸ್ರಾ ಯಾತ್ರೆ ಮುಗಿಸಿ ಸ್ವದೇಶಕ್ಕೆ ಹಿಂದಿರುಗಿ ಬಾಲ್ಖ್‍ನಲ್ಲಿದ್ದು ಇಸ್ಮೈಲಿ ಧರ್ಮಪ್ರಚಾರವನ್ನು ತೀವ್ರ ಆಸಕ್ತಿಯಿಂದ ಕೈಗೊಂಡ. ಈ ಕಾಲದಲ್ಲಿ ತುಂಬ ವಿರೋಧವನ್ನು ಎದುರಿಸಬೇಕಾಯಿತು. ಇಸ್ಲಾಮ್ ಧಾರ್ಮಿಕ ಸಂಪ್ರದಾಯಸ್ಥರು ಈತನನ್ನು ದೈವವಿರೋಧಿ, ಕಾಫಿರ ಎಂದು ಘೋಷಿಸಿ ಬಹಿಷ್ಕಾರ ಹಾಕಿದರು. ಪ್ರಾಣಕ್ಕೇ ಆಪತ್ತು ಬರಲಾಗಿ ಈತ ಸಿಯಂಗಾನ್‍ಗೆ ಓಡಿಹೋಗಬೇಕಾಯಿತು. ದೇಶಭ್ರಷ್ಟನಾಗಿ ಸುಮಾರು ಇಪ್ಪತ್ತು ವರ್ಷಕಾಲ ಹಿಂದೂಖುಷ್ ಪರ್ವತಾವಳಿಯ ಬದಕ್ಷನ್‍ಗಿರಿಯಲ್ಲಿ ಕೇವಲ ಕಂದಮೂಲಾದಿಗಳನ್ನು ತಿಂದುಕೊಂಡು ಸಾತ್ವಿಕ ಜೀವನ ನಡೆಸಿ ಈತ ಹಲವಾರು ಗ್ರಂಥಗಳನ್ನು ರಚಿಸಿದ. ಅನೇಕ ಭಕ್ತಿಗೀತೆಗಳನ್ನೂ ಬೋಧಪ್ರದ ಪದ್ಯಗಳನ್ನೂ ಬರೆದ. ಅವೆಲ್ಲ ಬಹುಮಟ್ಟಿಗೆ ದೀರ್ಘಪ್ರಗಾಥಗಳ ಮಾದರಿಯಲ್ಲಿವೆ.

ಈತನ ಜೀವನದ ಸುತ್ತ ಹಲವಾರು ಕಟ್ಟುಕಥೆ, ದಂತಕಥೆಗಳು ಹುಟ್ಟಿಕೊಂಡು ಆತ್ಮಕಥೆಯಾದ ದಿವಾನ್‍ನಲ್ಲಿ ಸೇರಿಕೊಂಡಿವೆ. ಸಫರ್‍ನಾಮಾ, ದೆವಾನ್ ಎಂಬ ಗದ್ಯಕೃತಿಗಳು, ರೋಷನ್-ಇ-ನಾಮಾ, ಸಾ-ಅದತ್-ನಾಮಾ, ಜಾದುಲ್ ಮುಸಾಫಿರಿನ್ ಎಂಬ ಪದ್ಯಕೃತಿಗಳೂ ಈತನ ಮುಖ್ಯ ಗ್ರಂಥಗಳು. ಇವಲ್ಲದೆ, ಹನ್ನೆರಡು ಇಸ್ಮೈಲಿ ಧರ್ಮಿಕ ಸಿದ್ಧಾಂತ ಗ್ರಂಥಗಳನ್ನೂ ಈತ ಬರೆದಿದ್ದಾನೆ. ಅವುಗಳಲ್ಲಿ ತತ್ತ್ವಶಾಸ್ತ್ರ ಮತ್ತು ಮತ ಧರ್ಮಶಾಸ್ತ್ರಗಳ ಸಮನ್ವಯವನ್ನು ಸಾಧಿಸಿರುವ ಜಮಿ ಅಲ್ ಹಿಕ್ಮತೇ ಎಂಬ ಕೃತಿ ಹೆಸರಾದುದು. ಸಫರ್ ನಾಮಾ ಎಂಬ ಪ್ರವಾಸಕಥನ ಪಾರಸಿ ಸಾಹಿತ್ಯದಲ್ಲಿ ಒಂದು ಉತ್ಕøಷ್ಟ ಗದ್ಯಕೃತಿ. ಖುಸ್ರು ತನ್ನ ತೀರ್ಥಯಾತ್ರೆ, ಪ್ರವಾಸ, ಈಜಿಪ್ಟಿನಲ್ಲಿ ಕಳೆದ ಕಾಲ-ಇವುಗಳಲ್ಲಿ ವಿವರಗಳನ್ನೆಲ್ಲ ದಿನಚರಿಯ ರೂಪದಲ್ಲಿ ಬರೆದಿಟ್ಟಿದ್ದಾನೆ. ಹೀಗಾಗಿ ಈ ಕೃತಿ ಸಮಕಾಲೀನ ಜೀವನದ ಅತ್ಯುತ್ತಮ ದಾಖಲೆ ಎನಿಸಿದೆ. ಅಲ್‍ಮುಸ್ತಾನ್ಸಿರ್ ಕಲೀಫನ ವೈಭವಯುತ ರಾಜ್ಯದ ಶ್ರೇಷ್ಠ ಆಡಳಿತದ ವರ್ಣನೆ ಈ ಪುಸ್ತಕದಲ್ಲಿ ದೊರೆಯುತ್ತದೆ. ಖುಸ್ರುವಿನದು ಸರಳವಾದ ವೀರ್ಯವತ್ತಾದ ಗದ್ಯಶೈಲಿ. ಈತನ ಶಬ್ದಸಂಪತ್ತು ಅಸಾಧಾರಣವಾದುದು. ಪದ್ಯಗಳು ಛಂದೋವೈವಿದ್ಯದಿಂದಲೂ ತಂತ್ರಸಿದ್ದಿಯಿಂದಲೂ ಕೂಡಿವೆ. `ಕುರಾನಿನ ಗಿಳಿಪಾಠದಿಂದ ಏನೂ ಪ್ರಯೋಜನವಿಲ್ಲ. ಜ್ಞಾನರಹಿತವಾದ ಸಾತ್ವಿಕತೆ ಏನನ್ನೂ ಸಾಧಿಸದು. ಜ್ಞಾನ ಧರ್ಮದ ಸೇವಕ ಮಾತ್ರ. ಧರ್ಮ ವಿಶ್ವಜೀವನದ ಪರಿಮಳ. ಈ ಜಗತ್ತು ಈಶ್ವರನ ಪಡಿನೆಳಲು (ಪ್ರತಿಬಿಂಬ). ಮನುಷ್ಯ ವಿಶ್ವದ ಅಣುರೂಪ. ವಿಧಿಯ ಶಾಸನಕ್ಕಿಂತಲೂ ಆತ್ಮಶಕ್ತಿ ಅಥವಾ ಇಚ್ಛಾಶಕ್ತಿ ದೊಡ್ಡದು. ಆತ್ಮವೇ ಪುಸ್ತಕ. ಕರ್ಮವೇ ಬರೆಹ. ನಿನ್ನದೇ ಕೈ. ನಿನ್ನದೇ ಇಚ್ಛೆ. ಆದುದರಿಂದ ಸತ್ಕರ್ಮ ವಿನಾ ಬೇರೆ ಏನನ್ನೂ ಬರೆಯಬೇಡ- ಇವು ಖುಸ್ರುವಿನ ಕೆಲವು ಅಮೂಲ್ಯ ವಿಚಾರಗಳು.

ಅತ್ಯುತ್ತಮ ಧಾರ್ಮಿಕ ಕಾವ್ಯಗಳನ್ನು ರಚಿಸಿರುವ ಈತ ಫಿರ್ದೂಸಿ, ಜಾಮಿ ಇವರ ಪಂಕ್ತಿಯಲ್ಲಿ ನಿಲ್ಲುವ ಶ್ರೇಷ್ಠ ಕವಿ. 
 											       (ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ